ನೀಮ್ಸ್ -
	ದಕ್ಷಿಣ ಫ್ರಾನ್ಸಿನ ಗಾರ್ ಡಿಪಾರ್ಟ್‍ಮೆಂಟಿನ ಆಡಳಿತ ಕೇಂದ್ರ. ಲೈಯನ್‍ಗೆ ದಕ್ಷಿಣ ನೈಋತ್ಯದಲ್ಲಿ ಉ.ಅ. 43º 50' ಮತ್ತು ಪೂ.ರೇ.4º21' ಮೇಲೆ ಇದೆ. ಜನಸಂಖ್ಯೆ 1,37,100 (1971ಅಂ) ಪ್ರಾಚೀನ ಅವಶೇಷಗಳಿಗಾಗಿ ಇದು ಪ್ರಸಿದ್ಧವಾಗಿದೆ. ಬಹುಶಃ ಕ್ರಿ,.ಶ. ಒಂದನೇ ಶತಮಾನದಲ್ಲಿ ನಿರ್ಮಿತವಾದ ಆಂಫಿತಿಯೇಟರ್ ಒಂದಿದೆ. 24,000 ಪ್ರೇಕ್ಷಕರು ಕೂಡಬಹುದಾದ ರಂಗಸ್ಥಳವಿದು. ಇಲ್ಲಿರುವ ಮತ್ತೊಂದು ಪ್ರಸಿದ್ಧ ಕಟ್ಟಡವೆಂದರೆ, ಮೇಸನ್ ಕ್ಯಾರಿ ಎಂಬ ದೇವಾಲಯ. ಇದು ಆಗಸ್ಟಸನ ದತ್ತುಮಕ್ಕಳಾದ ಗೇಯಸ್ ಮತ್ತು ಲೂಸಿಯಸ್ ಸೀಸರರಿಗೆ ಅರ್ಪಿತವಾಗಿತ್ತೆಂದು ಗೊತ್ತಾಗುತ್ತದೆ. ಇದೂ ಕ್ರಿ.ಶ. ಶಕೆಯ ಆರಂಭದ ಕಾಲದ್ದು. ರೋಮನ್ನರು ಗಾಲ್‍ನಲ್ಲಿ ನಿರ್ಮಿಸಿದ ಅತ್ಯಂತ ಸುಂದರ ಸ್ಮಾರಕಗಳಲ್ಲಿ ಇದೂ ಒಂದು. ಇಲ್ಲಿ ಈಗ ರೋಮನ್ ಶಿಲ್ಪ ಕೃತಿಗಳನ್ನು ಇಡಲಾಗಿದೆ. ನಗರದ ಹೊರಗಿನ ಬೆಟ್ಟದ ಮೇಲಿರುವ ಟೂರ್ ಮಾಗ್ನೆ ಎಂಬುದು ಅತ್ಯಂತ ಪ್ರಾಚೀನ ರೋಮನ್ ಕಟ್ಟಡ. ಇದರ ಸಮೀಪದಲ್ಲಿರುವ ಜಲಾಶಯದಿಂದ ರೋಮನರು ನಗರಕ್ಕೆ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡಿದ್ದರು. ಗಾಲ್ ಪ್ರದೇಶದಲ್ಲಿ ರೋಮನ್ ಪಟ್ಟಣಗಳ ಪೈಕಿ ನೀಮ್ಸ್ ಶ್ರೀಮಂತವಾಗಿದ್ದುದಾಗಿ ಕಂಡುಬರುತ್ತದೆ.

	ಗಾಲ್ ಬುಡಕಟ್ಟೊಂದಕ್ಕೆ ನೀಮ್ಸ್ ರಾಜಧಾನಿಯಾಗಿತ್ತು. ಕ್ರಿ.ಪೂ. 121ರಲ್ಲಿ ಇದು ರೋಮನರ ವಶವಾಯಿತು. ಚಕ್ರವರ್ತಿ ಆಗಸ್ಟಸ್ ಇಲ್ಲಿ ಹೊಸ ಪಟ್ಟಣವೊಂದನ್ನು ನಿರ್ಮಿಸಿ ಇದಕ್ಕೆ ಕೆಲವು ಹಕ್ಕುಗಳನ್ನು ನೀಡಿದ. ಇದರಿಂದ ನೀಮ್ಸ್ ಶೀಘ್ರವಾಗಿ ಅಭಿವೃದ್ಧಿ ಹೊಂದಿತು. 5ನೆಯ ಶತಮಾನದಲ್ಲಿ ವ್ಯಾಂಡಲರೂ (ಜರ್ಮಾನಿಕ್ ಜನ) ವಿಸಿಗಾತರೂ (ಗಾತರ ಒಂದು ಪಂಗಡ) ಇದನ್ನು ಕೊಳ್ಳೆ ಹೊಡೆದರು. ಅನಂತರ ಇದನ್ನು ಸಾರಸೆನರು (ಅರಬ್) ಆಕ್ರಮಿಸಿಕೊಂಡರು. ಅವರನ್ನು 737ರಲ್ಲಿ ಹೊರಗಟ್ಟಲಾಯಿತು. 10ನೆಯ ಶತಮಾನದಲ್ಲಿ ಇದು ಟೌಲೋಸಿನ ಕೌಂಟರಿಗೆ ಸೇರಿದ್ದು, 1229ರಲ್ಲಿ ಫ್ರೆಂಚ್ ದೊರೆಯ ಅಧೀನಕ್ಕೆ ಬಂತು. ಧರ್ಮಸುಧಾರಣೆಂiÀi ಕಾಲದಲ್ಲೂ ಫ್ರೆಂಚ್ ಕ್ರಾಂತಿಯ ಅನಂತರವೂ ನಡೆದ ಘರ್ಷಣೆಗಳಲ್ಲಿ ಇದು ನಷ್ಟಕ್ಕೆ ಒಳಗಾಯಿತು. 19ನೆಯ ಶತಮಾನದಲ್ಲಿ ರೈಲ್ವೆಯ ಆಗಮನದ ಅನಂತರ ಇದು ಮತ್ತೆ ಬೆಳೆಯತೊಡಗಿತು.							(ಆರ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ